ಶಿವವಮೊಗ್ಗ ರಂಗಾಯಣದಲ್ಲಿ ಮುಂದಿನ ತಿಂಗಳಿನಿಂದ ಮೂರು ತಿಂಗಳ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ರಂಗಭೂಮಿಯ ಹೊಸ ಆಯಾಮಗಳನ್ನು ರಂಗಾಸಕ್ತರಿಗೆ ಪರಿಚಯಿಸುವ, ನಾಟಕ ಸಾಹಿತ್ಯವನ್ನು ಅಧ್ಯಯನ ಮಾಡಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಸಹಯೋಗದೊಂದಿಗೆ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಎಂದರು.
ಮೂರು ತಿಂಗಳ ಅವಧಿಯಲ್ಲಿ ರಂಗಪಠ್ಯಗಳಾದ ಜಾಗತಿಕ ರಂಗಭೂಮಿ, ಭರತನ ನಾಟ್ಯಶಾಸ್ತ್ರ, ಭಾರತೀಯ ರಂಗಭೂಮಿ, ಅಭಿನಯ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ತರಗತಿಗಳಾದ ನಾಟಕ ಪ್ರಕಾರಗಳು ಮತ್ತು ರಚನೆ, ನಿರ್ದೇಶನ ಮತ್ತು ರಂಗ ತರಬೇತಿ ಮತ್ತು ನೇಪಥ್ಯ ವಿಚಾರಗಳ ಕುರಿತು ತರಬೇತಿ ನೀಡಲಾಗುವುದು. ಮುಂದಿನ ವರ್ಷದಿಂದ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಒಂದು ವರ್ಷದ ರಂಗಶಿಕ್ಷಣ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ರಂಗಶಿಕ್ಷಣಕ್ಕೆ ಸೇರ ಬಯಸುವ ಅಭ್ಯರ್ಥಿಗಳು ಕನಿಷ್ಟ ಪಿಯುಸಿ/ತತ್ಸಮಾನ ತೇರ್ಗಡೆಯಾಗಿರಬೇಕು. 18ರಿಂದ 35 ವರ್ಷ ಒಳಗಿರಬೇಕು. ಕೋರ್ಸಿನ ತರಬೇತಿ ಅವಧಿ ಸಂಜೆ 5.30ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ವಾರದಲ್ಲಿ ನಾಲ್ಕು ದಿನ ಕಟೀಲು ಅಶೋಕ ಪೈ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 30ಮಂದಿಗೆ ಪ್ರವೇಶಕ್ಕೆ ಅವಕಾಶವಿದ್ದು, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ನಮೂನೆ ರಂಗಾಯಣ ಮತ್ತು ಕಾಲೇಜಿನಲ್ಲಿ ಲಭ್ಯವಿದೆ. ಅರ್ಜಿಯೊಂದಿಗೆ ಶೈಕ್ಷಣಿಕ ಅಂಕಪಟ್ಟಿಯ ಪ್ರತಿ, ಪಾರ್ಸ್‍ಪೋರ್ಟ್ ಅಳತೆಯ 4 ಭಾವಚಿತ್ರ ಮತ್ತು ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು ಎಂದರು.