ಮಾರ್ಪಡಿಸಿದ ಸೈಲೆನ್ಸರ್ ಗಳನ್ನು ಬಳಸುವ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ದ್ವಿಚಕ್ರ ಹಾಗೂ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದೆ.
ಕರ್ನಾಟಕ ಮೋಟಾರು ವಾಹನ ಅಧಿನಿಯಮ- 1989 ರ ನಿಯಮ 33 ಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳ ನೋಂದಣಿ ಕಾರ್ಯ ನಡೆಯುತ್ತಿದೆ. ಖಾಸಗಿ ಡೀಲರ್ ಗಳಿಗೆ ವಹಿಸಿರುವ ಸಾರಿಗೆ ಇಲಾಖೆ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಿನ ಜಾರಿಯ ಬಗ್ಗೆ ಸಲ್ಲಿಕೆಯಾಗಿರುವ ಹಲವು ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳನ್ನು ಗುರುತಿಸಲು ಸಂಬಂಧಪಟ್ಟ ಪ್ರಾಧಿಕಾರಗಳು ಕಾರ್ಯಾಚರಣೆ ನಡೆಸಬೇಕು. ಅಂತಹ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮೌಖಿಕ ಆದೇಶ ನೀಡಿದೆ.
ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಮಾರ್ಪಡಿಸಿದ ಸೈಲೆನ್ಸರ್ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ. ಅದನ್ನು ತಡೆಯಲು ಮತ್ತು ಅಂತಹ ವಾಹನಗಳನ್ನು ಗುರುತಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಶಬ್ದ ಮಾಲಿನ್ಯ ಉಂಟು ಮಾಡುವ ರಾತ್ರಿ ಕ್ಲಬ್ ಗಳು ಮತ್ತು ಇತರೆ ಸಂಸ್ಥೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಸರಕಾರ ಮತ್ತು ಪೊಲೀಸ್ ಇಲಾಖೆಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಜನ ಸಂದಣಿ ಇರುವ ದಾರಿಗಳಲ್ಲಿ ಅವಶ್ಯಕತೆ ಇಲ್ಲದೆ ಇದ್ದರೂ, ಮೋಟಾರ್ ವಾಹನ ಗಳ ಶಬ್ದವನ್ನು ಹೆಚ್ಚಿಸುವವರಿಗೆ ಈ ಆದೇಶದಿಂದ ಕಡಿವಾಣ ಹಾಕಿದಂತಾಗುತ್ತದೆ.
ಶಬ್ದ ಮಾಲಿನ್ಯ ನಿಯಂತ್ರಣ ಮಾಹಿತಿ ಕೇಳಿದ ಹೈಕೋರ್ಟ್
Date: