ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರ ಬೆಳೆ ನಾಶಕ್ಕೆ ಕಾರಣವಾಗಿದೆ.
ಅಪಾರ ಬೆಳೆಯ ನಾಶದ ಪರಿಣಾಮವಾಗಿ ತರಕಾರಿಗಳ ಬೆಲೆ ಏರುಗತಿಯಲ್ಲಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಸೀಮೆ ಬದನೆಕಾಯಿ, ಬೀಟ್ರೂಟ್ ಹೊರತುಪಡಿಸಿ ಇತರೆ ಎಲ್ಲಾ ತರಕಾರಿಗಳು ಶೇ. 50ರಿಂದ 60 ರಷ್ಟು ಏರಿಕೆಯಾಗಿವೆ. ಗೆಡ್ಡೆಕೋಸು, ದಪ್ಪ ಮೆಣಸಿನಕಾಯಿ, ನುಗ್ಗೆಕಾಯಿ ಹೀಗೆ ಇತ್ಯಾದಿ ತರಕಾರಿಯ ಬೆಲೆ ಏರಿದೆ. 15 ಕೆಜಿ ಟೊಮೆಟೊ ಬಾಕ್ಸ್ ಕಳೆದ ತಿಂಗಳು 400ರಿಂದ 450 ರೂಗಳಿಂದ 800 ರೂ. ತಲುಪಿದೆ ಎಂದು ಫೋರ್ ಸ್ಟಾರ್ ಗ್ರೂಪ್ಸ್ ಟ್ರೇಡರ್ಸ್ ನ ಪ್ರಕಾಶ್ ಅವರು ತಿಳಿಸಿದ್ದಾರೆ.
ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವ ಮಳೆಯಿಂದಾಗಿ ಕೊಡಗಿನ ಕಾಫಿ, ಮಲೆನಾಡಿನ ಅಡಿಕೆ ಬೆಳೆ, ಚಾಮರಾಜನಗರ ಹಾಸನದಲ್ಲಿ ಮೆಕ್ಕೆಜೋಳ ರಾಗಿ ಬೆಳೆಗಳಿಗೆ ಹಾನಿ ಉಂಟುಮಾಡಿದೆ. ಕಟಾವಿಗೆ ಬಂದ ರಾಗಿ, ಶೇಂಗಾ, ಕಾಳುಮೆಣಸು ನಾಶವಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ದಲ್ಲಿ ಭಾರಿ ಪ್ರಮಾಣದ ನೀರು ನಿಂತು ಹೊಲಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಬೆಂಗಳೂರು, ಮೈಸೂರು, ದಾವಣಗೆರೆ, ಕೋಲಾರ ಮುಂತಾದ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.
ಪೈರು ಕೊಯ್ಲುಗುವ ಹಂತದಲ್ಲಿ ಇಂತಹ ದುಸ್ಥಿತಿ ಬಂದಿದೆ. ಕಷ್ಟಪಟ್ಟು ಬೆಳೆದ ಬೆಳೆಯು ಕೈಗೆ ಸೇರುವಷ್ಟರಲ್ಲಿ ನೀರುಪಾಲಾಗಿದೆ ಎಂದು ರೈತರು ಕಂಗಾಲಾಗಿದ್ದಾರೆ.
ಕಷ್ಟಪಟ್ಟು ಬೆವರು ಹರಿಸಿ, ಸಾಲ ಸೋಲ ಮಾಡಿ ಬೆಳೆದ ಬೆಳೆಯು ಇಂದು ನೀರುಪಾಲಾಗಿದೆ. ರೈತರ ಸ್ಥಿತಿ ಚಿಂತಾಜನಕ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯ ಸರ್ಕಾರ ಪರಿಹಾರ ಚಟುವಟಿಕೆ ಆರಂಭಿಸಬೇಕಿದೆ.