ಟಿ – 20 ವಿಶ್ವಕಪ್ ಟೂರ್ನಿಯ B – ಗುಂಪಿನಲ್ಲಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಪಂದ್ಯ ನಡೆಯಿತು. ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ರೋಚಕ ಜಯವನ್ನು ಸಾಧಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿದೆ.
ದುಬೈನ ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದ ಟಾಸ್ ನಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಮೊದಲ ಹಂತದ ವಿಕೆಟ್ ಜೊತೆಯಾಟದಲ್ಲಿ ಮಿಂಚಿದ ರಿಜ್ವಾನ್ 52 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಸಿಡಿಸಿ 67 ರನ್ ಗಳನ್ನ ಗಳಿಸಿದರು. ಮತ್ತೊಬ್ಬ ಬ್ಯಾಟ್ಸ್ ಮನ್ ಜಮಾನ್ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಬಾರಿಸಿ 55 ರನ್ ಕಲೆ ಹಾಕಿದರು. ಇವರಿಬ್ಬರ ರೋಚಕ ಬ್ಯಾಟಿಂಗ್ ನಿಂದಾಗಿ ಪಾಕ್ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.
ಇನ್ನಿಂಗ್ಸ್ ಅನ್ನು ಆರಂಭಿಸಿದ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಂ 35 ಎಸೆತಗಳಲ್ಲಿ 5 ಬೌಂಡರಿಗಳನ್ನು ಸಿಡಿಸಿ 39 ರನ್ ಗಳನ್ನ ಗಳಿಸಿದರು. ರಿಜ್ವಾನ್ ಅವರ ಕ್ಯಾಚ್ ಹಿಡಿಯುವಲ್ಲಿ ಆಸ್ಟ್ರೇಲಿಯಾ ಆಟಗಾರರು ವಿಫಲರಾದರು. ಈ ಎರಡು ಜೀವದಾನ ಲಾಭ ಪಡೆದ ರಿಜ್ವಾನ್ ಆಟ ರಂಗೇರಿತು. ರಿಜ್ವಾನ್, ಬಾಬರ್ ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿದರು. ಬಾಬರ್ ಈ ವಿಶ್ವಕಪ್ ನಲ್ಲಿ 300 ರನ್ ಗಳ ಗಡಿ ದಾಟಿಸಿ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ 3 ನೇ ಬ್ಯಾಟ್ಸ್ ಮನ್ ಎಂಬ ಬಿರುದಿಗೆ ಪಾತ್ರರಾದರು. ಆದರೆ ಆಸ್ಟ್ರೇಲಿಯಾದ ಸ್ಪಿನ್ನರ್ ಯಾಡo ಜಂಪಾ ಇನ್ನಿಂಗ್ಸ್ ನ 10 ನೇ ಓವರ್ ನಲ್ಲಿ ಬಾಬರ್ ಅವರ ವಿಕೆಟ್ ಪಡೆದರು. ನಂತರ ರಿಜ್ವಾನ್ ಜೊತೆಗೂಡಿದ ಜಮಾನ್ ಆಸ್ಟ್ರೇಲಿಯಾ ಬೌಲರ್ ಗಳಿಗೆ ಕಠಿಣ ಸವಾಲೋಡ್ಡಿದ್ದರು. ಜಮಾನ್ ಅಜೇಯ ಅರ್ಧಶತಕ ಗಳಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ರಿಜ್ವಾನ್ ಮತ್ತು ಜಮಾನ್ 72 ರನ್ ಸೇರಿಸಿದರು. 18 ನೇ ಓವರ್ ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ರಿಜ್ವಾನ್ ಔಟಾದರು. ಆದರೂ ಜಮಾನ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಹೋರಾಟದ ಮೊತ್ತ ಗಳಿಸಿಕೊಟ್ಟರು.
177 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಆಸ್ಟ್ರೇಲಿಯಾ 13 ಓವರ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಇವರಿಬ್ಬರ ಅಬ್ಬರದ ಬ್ಯಾಟಿಂಗ್ ಮೂಲಕ ಪಾಕ್ ಬೌಲರ್ಗಳು ಕಂಗೆಟ್ಟರು. ಸೋಲಿನ ಆತಂಕದಲ್ಲಿದ್ದಂತಹ ತಂಡವನ್ನು ಈ ಇಬ್ಬರು
ಗೆಲುವಿನ ದಡ ಸೇರಿಸಿದರು.
ಸತತ 5 ಪಂದ್ಯಗಳನ್ನು ಗೆದ್ದು ಭರವಸೆಯಲ್ಲಿದ್ದ ಪಾಕಿಸ್ತಾನ ಸೋಲಿನ ಸುಳಿಯಲ್ಲಿ ಸಿಲುಕಿ ನಿರಾಸೆ ಅನುಭವಿಸಿತು. ಒಟ್ಟಾರೆ ಆರಂಭದಿಂದ ಉತ್ತಮ ಪ್ರದರ್ಶನ ನೀಡಿದ್ದ ಪಾಕ್ ತಂಡ ಆಸ್ಟ್ರೇಲಿಯಾ ತಂಡದ ಗೆಲುವಿನ ಅಬ್ಬರಕ್ಕೆ ಸಿಲುಕಿ ಟಿ – 20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ.
ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ ಮೊದಲ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿತ್ತು. ಟಿ – 20 ವಿಶ್ವಕಪ್ ಯಾವ ತಂಡಕ್ಕೆ ವಿಜಯಮಾಲೆ ಬೀಳಲಿದೆ ಎಂದು ಕಾದು ನೋಡಬೇಕಾಗಿದೆ.