ರಾಜ್ಯದ ಮೂರು ಸಾಧಕರಿಗೆ ಮಂಗಳವಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೈದ್ಯ ಮತ್ತು ಶಿಕ್ಷಣ ತಜ್ಞ ಬಿ.ಎಂ. ಹೆಗ್ಡೆ, ಪ್ಯಾರಾ ಅಥ್ಲೀಟ್ ಕೆ.ವೈ. ವೆಂಕಟೇಶ್, ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಸೇರಿದಂತೆ ಹಲವು ಗಣ್ಯರು ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿದರು. ಕೆ. ವೈ. ವೆಂಕಟೇಶ್ ಹಾಗೂ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಹಾಗೂ ಬಿ.ಎಂ. ಹೆಗ್ಡೆ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ , ಅಗ್ರಿ ಶಿಲ್ಪಿ ಸುದರ್ಶನ್ ಸಾಹೂ ಅವರು ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದರೆ, ಎಸ್. ಪಿ. ಬಾಲಸುಬ್ರಮಣ್ಯಂ ಪರವಾಗಿ ಅವರ ಪುತ್ರ ಪದ್ಮವಿಭೂಷಣ ಸ್ವೀಕರಿಸಿದರು.
ಡಾ.ಬಿ.ಎಂ. ಹೆಗಡೆ ಅವರು ವ್ಹೀಲ್ ಚೇರ್ ನಲ್ಲಿ ಬಂದು ಪ್ರಶಸ್ತಿ ಪಡೆದುಕೊಂಡರು. ಜೋಗತಿ ಮಂಜಮ್ಮ ಅವರು ಪ್ರಶಸ್ತಿ ಪಡೆದ ಬಳಿಕ ರಾಷ್ಟ್ರಪತಿಯವರಿಗೆ ದೃಷ್ಟಿ ತೆಗೆಯುವ ಮೂಲಕ ಗಮನ ಸೆಳೆದರು.
ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್, ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್, ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಘೋಷಿಸಿದ್ದು, ಗೊಗೊಯ್ ಅವರ ಪತ್ನಿ, ಪಾಸ್ವಾನ್ ಅವರ ಪುತ್ರ ಹಾಗೂ ಪಟೇಲ್ ಪುತ್ರ ಪ್ರಶಸ್ತಿ ಸ್ವೀಕರಿಸಿದರು.
ಟೇಬಲ್ ಟೆನಿಸ್ ಆಟಗಾರ್ತಿ ಮೌಮಾದಾಸ್, ಕುಸ್ತಿಪಟು ವೀರೇಂದರ್ ಸಿಂಗ್, ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿದ ಲೆಫ್ಟಿನೆಂಟ್ ಕರ್ನಲ್ ಖ್ವಾಜಿ ಸಜ್ಜದ್ ಅಲಿ ಜಹೀರ್, ಸೇರಿದಂತೆ 51 ಸಾಧಕರಿಗೆ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ನಾಲ್ವರಿಗೆ ಪದ್ಮವಿಭೂಷಣ, ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮತ್ತಷ್ಟು ಕನ್ನಡಿಗರಿಗೆ ಪದ್ಮ ಪುರಸ್ಕಾರ
Date: