Saturday, December 6, 2025
Saturday, December 6, 2025

ಸಾಹಿತ್ಯವಿಹಾರ : ಕವಿತಾಂಕಣ

Date:

ಹಾಡುಗಳು ಮುಗಿದಿಲ್ಲ!

ದೂಡಬಹುದೇ ಸುಮ್ಮನೆ
ಯಾರನ್ನಾದರೂ
ಹೇಗೋ ನುಸುಳಿದ ಬೇಡದ ಸಾಲೊಂದನ್ನು
ಕವಿತೆಯೊಳಗಿಂದ ಅನಾಮತ್ತು
ಕಾಟು ಹಾಕಿದಂತೆ!

ಬರೆದ ಪದ್ಯದ ಪದಗಳ ಅದಲು ಬದಲಾಗಿಸಿ
-ದ ಹಾಗೆ
ಎದೆಯ ಗೂಡ ನೆನಪ ಚಿತ್ರಗಳನ್ನು
ಕತ್ತರಿಸಿ ನಕಲಿಸಿ ಅಂಟಿಸಿದಷ್ಟು ಸಲೀಸಲ್ಲ!

ಕೋಗಿಲೆಗೂ ಕಾವಿಗಿಷ್ಟು ಜಾಗ ಬೇಕು
ಕಾಗೆ ತತ್ತಿಯ ಹೊರ
ಹಾಕಿದ್ದು ಮಾಮರಕೂ ನೆನಪಿಲ್ಲ!
ನಾವಾದರೂ ಯಾಕೆ ದೂಡೋಣ?

ಬಂದ ಮಳೆ ಕಳೆದ ಋತುವ ಮತ್ತೆ
ನೆನೆದು ಅತ್ತಿದ್ದೋ, ಸಂಭ್ರಮಿಸಿದ್ದೋ ಬಲ್ಲವರಾರು
ಕಣ್ಣ ಹನಿಗಳ ಕೆನ್ನೆ ಮೇಲೆ
ಉರುಳಿಸಿದಂತೆ ಎದೆಗಿಳಿದವರ ಕೆಡವಲಾದೀತೆ ಹೇಳಿ?

ಬೇಕಾದ ಗಟ್ಟಿ ಬೀಜ ಪಡೆದ ಮಣ್ಣು
ಮೊಳಕೆ ಬರಿಸಿ
ಮುಗಿಲಿಗೆ ಮುಖ
ಮಾಡುವುದನ್ನು ಕಲಿಸಿ ಕಳಿಸುತ್ತದೆ; ಜೊಳ್ಳು
ತನ್ನೊಡಲಲ್ಲಿಯೇ ಕರಗಿಸಿದಂತೆ
ನಾವು ನೀವು ದೂಡಲಾದೀತೇ ?
ಕಣ್ಮುಂದಿನ ಬಂಧನವಿದು ಬೇಡವಾದರೂ
ಬೆರಳ ಹಿಡಿದು ಸಾಗಬೇಕು
ಹಾಡುಗಳು ಮುಗಿದಿಲ್ಲ!

ಜಾಗವಿಲ್ಲ ಅಂದವರಾರು ಮನದ ಮನೆಯೊಳಗೆ
ನೂರು ಮಾತುಗಳ ಜೀರ್ಣಿಸಿಕೊಂಡ ಒಂದು ಹಾಡು
ಎಲ್ಲರೆದಯ ದನಿಯಾಗಿದ್ದು
ಹಳೆಯ ಕತೆ
ಬೇಡದವರ ದೂಡಿ ಫಲವೇನು
ಜೊತೆಗಿದ್ದು ಜತೆಯಾಗುವುದು ಇಂದಿನ ತುರ್ತು
ನಾಳೆ ಮತ್ತೇನಿಹುದೋ…..
ಕವಿತೆಗಳು ಭಾರ ಅನ್ನಿಸುವುದಿಲ್ಲ ಅಷ್ಟೆ!

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಬುದ್ಧ ರೈತ

ಮನದ ಹೊಲ
ನೂರು ಕಳೆಗಳ ಕಡಲು ಮೂಲೆಗಂಟಿದ ಜೇಡ
ನಿನ್ನೆಗಳ ಕಾಣಿಸಲು ನೇಯ್ದಿದೆ ಬಲೆ!

ಕಣ್ಣ ಕಾಡು
ಎದುರಾದ ಮಿಕಗಳ ಹೊಡೆದು
ಕೆಡವಲು ಹುನ್ನಾರ,
ಹೊಲಕ್ಕೆ ಕಾಲಿಟ್ಟವರೆಲ್ಲಾ ಮಾಲೀಕರು
ಹರಗದ ಹೊಲ ಎಷ್ಟು ನೋಡಿಕೊಂಡರೇನು
ಗಡ್ಡ ಕೆರೆವ ನೆಪದಿ ಗಾಯ ಮಾಡಿಕೊಂಡಂತೆ

ಅಂಗುಲಿಮಾಲ ಬದುವಿನಲ್ಲಿ ಪಹರೆ
ಮೇಯಲು ಬಂದವರೆಲ್ಲಾ ಹೊಲಕೆ ಬಲಿ
ಹೊಲವೆಂದರೇನು ಫಸಲು ಇದೆಇಲ್ಲವೆಂಬ
ಮಾಯದ ಕನ್ನಡಿ ಹಿಡಿದು ಕನಸುಗಳಿಗೆ
ಕಿಡಿ ಹೊತ್ತಿಸಬೇಕು
ಕಳೆ ಬೂದಿಯಾಗುವುದಾ ಕಾದು ನೋಡಬೇಕು
ಅವನೊಬ್ಬ ಬರಬೇಕೆಂದು ನಿಟ್ಟುಸಿರ
ತರಂಗದಲ್ಲಿ ಹೊಲದ ಮಾಲೀಕ ಎದರು ನೋಟ!

ನಗುವ ನೇಗಿಲ ಹೆಗಿಲಿಗಿಟ್ಟು ಒಳಹೊರ ಎತ್ತುಗಳ ಕಟ್ಟಿ
ಬರಬೇಕಿದೆ ಬುದ್ಧನೆಂಬೋ ರೈತ
ಶತಮಾನಗಳು ಸವೆದವು, ನಕ್ಕ ಹೂ ಅಲ್ಲೊಇಲ್ಲೋ
ಮತ್ತೆ ಮತ್ತೆ ಬುದ್ಧ ಕೂತು ಏಳುವ ಮರಗಳು
ಅಮ್ಮನ ತುತ್ತಂತೆ ಅಪರೂಪ!

ಹೊಲದ ವಿಷವನಿಳಿಹಿ ಅನ್ನ ಹುಟ್ಟಿಸುವ
ನೇಗಿಲಯೋಗಿ ಇಂದಿನ ತುರ್ತು
ಬುದ್ಧ ಬರುವ ಸೂಚನೆ ಕಮ್ಮಿ!

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಮೂಲ ಹೆಸರು- ಸೈಯದ್ ಫೈಜುಲ್ಲಾ
ಕಾವ್ಯ ನಾಮ- ಸಂತೆಬೆನ್ನೂರು ಫೈಜ್ನಟ್ರಾಜ್
ಊರು- ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು
ವೃತ್ತಿ- ಕನ್ನಡ ಅಧ್ಯಾಪಕ
ಪುಸ್ತಕ ಪ್ರಕಟಣೆ-
೧. ಎದೆಯೊಳಗಿನ ತಲ್ಲಣ( ಕವನಗಳು)
೨. ಮಂತ್ರದಂಡ( ಮಕ್ಕಳ ಕವನಗಳು)
೩.ಬುದ್ಧನಾಗಹೊರಟು(ಕವನಗಳು)
೪. ಸ್ನೇಹದ ಕಡಲಲ್ಲಿ ( ಮಕ್ಕಳ ಕತೆಗಳು)
೫.ಹಬ್ಬಿದಾ ಮಲೆ ಮಧ್ಯದೊಳಗೆ( ಕಥಾ ಸಂಕಲನ)
೬. ಕೇಳದೆ ನಿಮಗೀಗ ( ಪ್ರೇಮ ಕಾವ್ಯ)
೭ ಲೋಕದ ಡೊಂಕು ( ಆಧುನಿಕ ವಚನಗಳು)
೮ ಬುದ್ಧನಿಗೆ ಕೊರೋನಾ ಸೋಂಕಿಲ್ಲ( ಕವಿತೆಗಳು
ಪ್ರಶಸ್ತಿ:- ಸಂಚಯ ಕಾವ್ಯ ಪುರಸ್ಕಾರ
ಹಾಮಾನಾ ಕಥಾ ಪುರಸ್ಕಾರ
ಸ್ನೇಹಶ್ರೀ ಪ್ರಶಸ
ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ಕತೆಯೊಂದು ಪಠ್ಯ
ರಾಜ್ಯ ಮಟ್ಟದ ಕತಾ ಸ್ಪರ್ಧೆ ಯಲ್ಲಿ ಎರಡು ಬಾರಿ
( ಹಾಸನ ಮತ್ತು ಬೆಂಗಳೂರು)
೨೦೨೧ ರ ರಾಜ್ಯ ಮಟ್ಟದ ” ಗವಿಸಿದ್ದ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ.
ಅಖಿಲ ಭಾರತ ಕ.ಸಾ.ಸಮ್ಮೇಳನದಲ್ಲಿ ಕವಿತೆ, ಸಂವಾದಗೋಷ್ಠಿ ಮತ್ತು ವಿಚಾರ ಮಂಡನೆ
ಆಕಾಶವಾಣಿ ಗಳಲ್ಲಿ ಕತೆ,ಕವನ, ವಿಚಾರಧಾರೆ ಪ್ರಸಾರ
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಸದಸ್ಯರು
ವಾಸ :ಸಂತೆಬೆನ್ನೂರು
ಚನ್ನಗಿರಿ ತಾ, ದಾವಣಗೆರೆ ಜಿಲ್ಲೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...