ಯುಗಧರ್ಮ ರಾಮಣ್ಣ ಇವರು ಯುಗಧರ್ಮ ಎಂಬ ಅಂಕಿತದಿಂದ ಸಾವಿರಾರು ತ್ರಿಪದಿಗಳು ಹಾಗೂ ಲಾವಣಿಗಳನ್ನು ಬರೆದಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಿದ್ದನಮಠ ಗ್ರಾಮದವರಾದ ರಾಮಣ್ಣ ಅನಕ್ಷರಸ್ಥ ಕವಿ. ಇವರು ಅನಕ್ಷರಸ್ಥರಾದರೂ ಸರಸ್ವತಿ ಇವರ ನಾಲಿಗೆ ಮೇಲೆ ನಲಿದಾಡುತ್ತಿದ್ದಾಳೆ. ಬಾಲ್ಯದಲ್ಲಿ ಎಮ್ಮೆ ಕಾಯಲು ಹೋಗುತ್ತಿದ್ದರು.ರಾಮಣ್ಣನಿಗೆ ನಾಟಕದ ಹುಚ್ಚು. ನಾಟಕದಲ್ಲಿ ಅಭಿನಯ ಮಾಡುತ್ತಿದ್ದರೆ ಇವರ ಪಾತ್ರವನ್ನು ನೋಡಲು ಜನರೆಲ್ಲಾ ಕಾತರದಿಂದ ಕಾಯುತ್ತಿದ್ದರು. ಅದೊಂದು ದಿನ ರಾಮಣ್ಣ ಗೆಳೆಯರ ಜೊತೆ ಮರದ ಕೆಳಗೆ ಕೂತು ಮಾತನಾಡುತ್ತಿದ್ದರು.ಆಗ ಅದೇನೋ ಮಿಂಚಿನ ಹಾಗೆ ಪ್ರಭೆಯೊಂದು ಬಂದು ಅವರ ತಲೆ ಒಳಗೆ ಹೋದಂತೆ ಆಯ್ತಂತೆ. ಆಗ ರಾಮಣ್ಣನ ತಲೆಯಲ್ಲಿ ಕೂಡಲೇ ಒಂದು ತ್ರಿಪದಿ ಬಂತಂತೆ. ಅದು ಅವರ ಮೊದಲ ತ್ರಿಪದಿ. “ರಾಜಕೀಯಕ್ಕೆ ಇಳಿಯದೆ ಸೋಜಾಗಿ ಇರುವವನು ಗೀಜಗದ ಗೂಡು ಇದ್ದಂತೆ ಅವನ ಬಾಳು ಮೋಜಾಗಿ ಇರುವುದೋ ಯುಗಧರ್ಮ” ಯುಗಧರ್ಮ, ಯುಗಧರ್ಮನ ತ್ರಿಪದಿಗಳು, ತೋಚಿದ್ಗೀಚು, ವಚನ ಧರ್ಮ ಎಂಬ ಪುಸ್ತಕಗಳು ಹೊರಬಂದಿದೆ. ಇವರ ಲಾವಣಿ ಸಂಗ್ರಹಿಸಿ ಶಿವಮೊಗ್ಗದ ಯುವರಾಜ್ ಕ್ಯಾಸೆಟ್ ಕೂಡ ಮಾಡಿದ್ದಾರೆ. ದಡ್ಡರ ಪದ ವಿಶ್ವವಿದ್ಯಾಲಯ ಎಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ.ಅಲ್ಲಿ ನಮ್ಮ ಗ್ರಾಮೀಣ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಯೋಜನೆ ಅವರದ್ದು. ರಾಮಣ್ಣ ಯಾವತ್ತೂ ತನ್ನನ್ನು ತಾನು ಎಂದೂ ಹೊಗಳಿಕೊಳ್ಳುವುದಿಲ್ಲ. ತನ್ನನ್ನೇ ತಾನು ಮಂಗ ಎಂದು ಹೇಳಿಕೊಳ್ಳುತ್ತಾರೆ. ಈ ಮಂಗ ಒಮ್ಮೆ ಬೆಂಗಳೂರಿಗೆ ಹೋಗಿತ್ತು, ಕಳ್ಳಿ ಸಾಲಲ್ಲಿ, ಕೊಳ್ಳಿ ಬೆಳಕಲ್ಲಿ, ತೆಳ್ಳನೆ ರಾಗಿ ಅಂಬಲಿ ಕುಡಿದು ಬೆಳೆದ ಮಂಗ ಇದು….. ಹೀಗೆ ತಮ್ಮ ಬಗ್ಗೆ ತಾವು ಹೇಳಿಕೊಳ್ಳುತ್ತಾರೆ. ಇವರು ಈ ಹಿಂದೆ ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅನಕ್ಷರಸ್ಥ ಕವಿಯೊಬ್ಬ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿರುವ ಇತಿಹಾಸ ರಾಜ್ಯದಲ್ಲಿ ಇದೇ ಮೊದಲು. ಕನ್ನಡದ ತೇರ ಕಟ್ಟೋಣ ಬನ್ನಿ ಎಂಬ ರಚನೆ ಬಹಳ ವೈಶಿಷ್ಟ್ಯದಿಂದ ಕೂಡಿದೆ. ಜಾತ್ರೆಯ ತೇರನ್ನ ವಿವಿಧವಾಗಿ ಅಲಂಕರಿಸಿ ಆನಂದಿಸುತ್ತೆವೆ. ತೇರಿನ ಪ್ರತಿ ವಿನ್ಯಾಸಕ್ಕೂ ಬಹುತೇಕ ಕನ್ನಡದ ಎಲ್ಲಾ ಕವಿಗಳ ಹೆಸರನ್ನ ಸಮೀಕರಿಸಿ ಪದ ಕಟ್ಟಿರುವ ಜಾಣ್ಮೆ ರಾಮಣ್ಣ ಅವರದ್ದು. ಅವರೇ ಹಾಡಿರುವ ತೇರ ಕಟ್ಟೊಣ ಬನ್ನಿ ಎಂಬ ಹಾಡಿನಲ್ಲಿ ಜಾನಪದ ಸೊಗಡಿದೆ. ( ಪರಿಚಯ ಮಾಹಿತಿ : ಶ್ರೀ ರಾಮಚಂದ್ರ ನಾಡಿಗ್ . ಪತ್ರಕರ್ತರು , ಶಿವಮೊಗ್ಗ)SHOW LESS
ದಡ್ಡನೆಂದು ಕರೆದುಕೊಂಡ ದೊಡ್ಡ ಕವಿ
Date: