ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಪ್ರಾರಂಭವಾಗಿದೆ. ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸುಪ್ರೀಂ ಕೋರ್ಟ್ ಹಸಿರು ಪಟಾಕಿ ಬಳಸಲು ಅನುಮತಿ ನೀಡಿದೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಈ ಅನುಮತಿಯ ಹಿನ್ನೆಲೆಯಲ್ಲಿದೆ. ಯಾವುದೇ ಜನಾಂಗದ ವಿರುದ್ಧವು ಕೂಡ ಈ ಸೂಚನೆ ಹೊರಡಿಸಿಲ್ಲ. ಇಡೀ ಸಮುದಾಯದ ಕ್ಷೇಮ ನ್ಯಾಯಾಂಗದ ಹೊಣೆ ಎಂದು ಸ್ಪಷ್ಟೀಕರಿಸಿದೆ.
ದೀಪಾವಳಿ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಹಿರಿಯರು ಸೇರಿ ಪಟಾಕಿ ಸಿಡಿಸುವುದು ವಾಡಿಕೆಯಾಗಿದೆ. ಆದರೆ ಹಸಿರು ಪಟಾಕಿ ಗ್ರಾಹಕರ ಕೈಗೆ ನಿಲುಕಲಾರದಷ್ಟು ದುಬಾರಿಯಾಗಿದೆ. ಸಾಗಾಣಿಕೆ ವೆಚ್ಚ, ರಾಸಾಯನಿಕ ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಿಂದ ಈ ಬಾರಿ ಹಸಿರು ಪಟಾಕಿ ಬೆಲೆ ಶೇ.30 ರಷ್ಟು ಏರಿಕೆಯಾಗಿದೆ.
ದೇಶದಲ್ಲಿ ಪಟಾಕಿ ತಯಾರಿಕೆಗೆ ತಮಿಳುನಾಡಿನ ಶಿವಕಾಶಿಯು ಹೆಸರುವಾಸಿಯಾಗಿದೆ. ಇಲ್ಲಿಂದ ರಾಜ್ಯದ ಬೆಂಗಳೂರು ಮೈಸೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಡೀಲರ್ ಗಳ ಮೂಲಕ ಪಟಾಕಿ ಹಂಚಿಕೆಯಾಗುತ್ತದೆ. ಹೋಲ್ಸೇಲ್ ದರದಲ್ಲಿ ಸಿಗುವ ಪಟಾಕಿಗಳ ಸಾಗಾಣಿಕೆ ವೆಚ್ಚ ಹೊರೆಯಾಗಿದ್ದು, ಶೇ. 8.5 ರಷ್ಟು ಶೇ. 12 ರಷ್ಟು ಬೆಲೆ ಏರಿಕೆ ಮಾಡಿದ್ದಾರೆ.
ಸಾಮಾನ್ಯ ಹೂಕುಂಡದ ಪಟಾಕಿ ಬಾಕ್ಸ್ ಗೆ 100-200 ರೂಪಾಯಿ, ಹಸಿರು ಪಟಾಕಿ ಹೂಕುಂಡದ ಬಾಕ್ಸ್ ಗೆ 500-550 ರೂಪಾಯಿ ಹೆಚ್ಚಳವಾಗಿದೆ. ಸಾಮಾನ್ಯ ಪಟಾಕಿ ಬಾಕ್ಸ್ 20-100 ರೂಪಾಯಿ, ಹಸಿರು ಪಟಾಕಿ ಬಾಕ್ಸ್ 200-400 ರೂಪಾಯಿ ಏರಿಕೆಯಾಗಿದೆ. ಸಾಮಾನ್ಯ ಭೂ ಚಕ್ರದ ಬಾಕ್ಸ್ 50-100 ರೂಪಾಯಿ, ಹಸಿರು ಪಟಾಕಿಯ ಭೂ ಚಕ್ರದ ಬಾಕ್ಸ್ 120-250 ರೂಪಾಯಿಗಳಷ್ಟು ಹೆಚ್ಚಳವಾಗಿದೆ ಮತ್ತು ಸಾಮಾನ್ಯ ಆಟಂ ಬಾಂಬ್ 100-110 ರೂಪಾಯಿ ಏರಿಕೆಯಾದರೆ, ಹಸಿರು ಪಟಾಕಿಯ ಆಟಂ ಬಾಂಬ್ 120-150 ರೂಪಾಯಿಗಳಷ್ಟು ದುಬಾರಿಯಾಗಿದೆ.
ಈ ಬಾರಿಯ ದೀಪಾವಳಿ ಹಬ್ಬದ ಪಟಾಕಿ ದರ ಸಾಮಾನ್ಯ ವರ್ಗದವರ ಮೇಲೆ ಹೊರೆಯಾಗಿ ಪರಿಣಮಿಸಿದೆ.