Saturday, September 28, 2024
Saturday, September 28, 2024

ಹಳ್ಳಿ ಹೃದಯದ ‘ಬಂಗಾರ’

Date:

ಶೀ ಎಸ್.ಕೆ ಶೇಷಚಂದ್ರಿಕ ಅವರು ನಾಡಿನ ಹಿರಿಯ ಮಾಧ್ಯಮ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ, ಆಕಾಶವಾಣಿ , ದೂರದರ್ಶನ, ಇಂತಹ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ. ಹಿರಿಯ ಪತ್ರಕರ್ತರಾಗಿ ನಾಡಿನ ಪ್ರಮುಖ ದಿನ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿಯೂ ಖ್ಯಾತಿಯನ್ನು ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಬಾತ್ಮೀದಾರರಾಗಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಭಾರತ ಸರ್ಕಾರವು ನೀಡುವ ಎಲ್.ಕೆ. ಶರ್ಮಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರಸ್ತುತ ಈ ವರ್ಷ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ರಾಜ್ಯೋತ್ಸವ ಮತ್ತು ಮಾಧ್ಯಮ ಪ್ರಶಸ್ತಿಗಳನ್ನೂ ಸಹ ನೀಡಿ ಗೌರವಿಸಲಾಗಿದೆ. ಸಾರೆಕೊಪ್ಪ ಬಂಗಾರಪ್ಪ ನವರು ಮುಖ್ಯಮಂತ್ರಿಯವರಾಗಿದ್ದಾಗ ಇವರು ಮಾಧ್ಯಮ ಕಾರ್ಯಾದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಲೇಖನದಲ್ಲಿ ಬಂಗಾರಪ್ಪನವರೊಂದಿಗಿನ ಮಾನವೀಯ ಪ್ರಸಂಗದ ನೆನಪನ್ನು ಹಂಚಿಕೊಂಡಿದ್ದಾರೆ.

ಹಳ್ಳಿ ಹೃದಯದ ‘ಬಂಗಾರ’

ನಾಡಿನ ಜನತೆ ದಿವಂಗತ ಬಂಗಾರಪ್ಪ ನವರನ್ನು ಎಂದಿಗೂ ಮರೆಯುವಂತಿಲ್ಲ. ಕೃಷಿಕ ಸಮುದಾಯ ಅವರು ಕೈಗೊಂಡ ದಿಟ್ಟ ನಿರ್ಧಾರಕ್ಕೆ ಖುಣಿಯಾಗಿದೆ. ಇವರಂತಹ ಮಾನವೀಯ ಗುಣಗಳ ನಾಯಕ ಪುನಃ ಸಿಗುವುದು ಅಪರೂಪ. ನಾನು ಮುಖ್ಯಮಂತ್ರಿ ಬಂಗಾರಪ್ಪನವರ ಆಪ್ತ ಸಹಾಯಕರಲ್ಲಿ ಒಬ್ಬನಾಗಿದ್ದೆ. ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದವನು. ಹೀಗಾಗಿ ಅವರ ಗುಣದೋಷಗಳನ್ನು ತಿಳಿದವನು. ಹೃದಯ ವೈಶಾಲ್ಯತೆಯಲ್ಲಿ ಬಂಗಾರಪ್ಪನವರು ಸಾಕ್ಷಾತ್ ದಾನಶೂರ ಕರ್ಣ. ಆದರೆ, ಅವರಲ್ಲಿದ್ದ ದೌರ್ಬಲ್ಯವೆಂದರೆ ಶೀಘ್ರಕೋಪ, ತಾಳ್ಮೆ ಕಡಿಮೆ. ಬೇರೆಯವರ ಮಾತು ಹಿಡಿಸದಿದ್ದರೆ ಕೂಡಲೇ ತಾಳ್ಮೆಗೆಡುವ ಸ್ವಭಾವ ಅವರದ್ದು.
ಬಂಗಾರಪ್ಪನವರು ಒಮ್ಮೆ ತಾಳ್ಮೆ ಕಳೆದುಕೊಂಡು ಮರುಘಳಿಗೆಯಲ್ಲೇ ಹೃದಯ ಶ್ರೀಮಂತಿಕೆ ತೋರಿದ ಪ್ರಸಂಗವನ್ನು ಹೇಳಬಯಸುತ್ತೇನೆ.
ಬಂಗಾರಪ್ಪನವರು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ಐದು ತಿಂಗಳಾಗಿತ್ತು. ಒಂದು ದಿನ ಸಂಜೆ ನಡೆದ ಘಟನೆ ಇದು. ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ನಿವಾಸ “ಕಾವೇರಿ”ಯಲ್ಲಿ ನಡೆದ ಪ್ರಸಂಗ.
ಮುಖ್ಯಮಂತ್ರಿಯಾದರು ರಾಜಧಾನಿಯಲ್ಲಿ ಇದ್ದಾಗ ಸಂಜೆಯವರೆಗೂ ಬ್ಯಾಡ್ಮಿಂಟನ್ ಆಟ ಆಡುವುದು ಬಂಗಾರಪ್ಪನವರ ಖಾಯಂ ಹವ್ಯಾಸ. ಉತ್ತಮ ಕ್ರೀಡಾಪಟು ಅವರು.
ಅಂದೊಂದು ದಿನ ಬಂಗಾರಪ್ಪನವರ ಸ್ವಕ್ಷೇತ್ರ ಸೊರಬ ತಾಲೂಕಿನ ಕೆಲವು ಗ್ರಾಮಗಳ ಎರಡು ಬಸ್ ಜನ “ಕಾವೇರಿ” ಬಾಗಿಲಿಗೆ ಬಂದಿಳಿದರು. ಮುಂಚಿತವಾಗಿ ಮುನ್ಸೂಚನೆ ಕೊಡದೇ ತಮ್ಮ ಪ್ರೀತಿಯ ಬಂಗಾರಣ್ಣನನ್ನು ನೋಡಲು ಬೆಂಗಳೂರಿಗೆ ದಿಡೀರ್ ಬಂದಿಳಿದಿದ್ದರು. ಆಗಿನ್ನೂ ಮೊಬೈಲ್ ಇರಲಿಲ್ಲ. ಕನಿಷ್ಠ ಟೆಲಿಫೋನ್ ನಲ್ಲಿ ಕರೆ ಮಾಡಿ ಬರಬೇಕಿತ್ತು, ಮಲೆನಾಡಿನ ಮುಗ್ಧರು. ಮುಖ್ಯಮಂತ್ರಿಯನ್ನು ಕಾಣುವ ಉತ್ಸಾಹವೇ ಹೊರತು ‘ಶಿಷ್ಟಾಚಾರ’ ಏನೇನು ತಿಳಿಯದ ಅಮಾಯಕರು.
ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಎಂದರೆ ಮುಂಭಾಗ ಹಾಗೂ ಎಡಬಲದಲ್ಲಿ ವ್ಯವಸ್ಥಿತವಾಗಿ ಬೆಳೆಸಿರುವ ಕೈತೋಟ. ವರ್ಷವಿಡಿ ಹಸಿರು ಕಂಗೊಳಿಸುವ ಪೊದೆಯಂತಹ ಗಿಡಗಳ ಉದ್ಯಾನ ಈ ಸದನ. ಮಲೆನಾಡಿಗರಿಗೆ ಇದು ಸಾಗರ -ಸೊರಬವಿದ್ದಂತೆ.
ಸಾಮಾನ್ಯವಾಗಿ ಸಂಜೆಯವರೆಗೂ ಆಟವಾಡಿ ಬಳಲಿ ಬೆವರು ಸುರಿಸಿದರೂ ಲವಲವಿಕೆ ಮತ್ತು ಹುರುಪಿನಿಂದ ಮನೆಗೆ ಹಿಂದಿರುಗುತ್ತಿದ್ದರು ಬಂಗಾರಪ್ಪ.
ಅವರ ಕ್ಷೇತ್ರದ ಜನ ಎರಡು ಬಸ್ಸುಗಳಿಂದ ಕಾವೇರಿಯಲ್ಲಿ ಇಳಿದಾಗ ಮುಖ್ಯಮಂತ್ರಿ ಇನ್ನೂ ಬಂದಿರಲಿಲ್ಲ. ಕಾಗದ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಪತ್ರಿಕಾ ಕಾರ್ಯದರ್ಶಿಯಾದ ನಾನು ಮತ್ತು ನನ್ನ ಸಹೋದ್ಯೋಗಿ ನಟರಾಜ್ ಸಾಹೇಬರಿಗಾಗಿ ಕಾಯುತ್ತಿದ್ದೆವು.

Sarekoppa Bangarappa


ಆಗಷ್ಟೇ ಕಾವೇರಿ ಭವನದ ಒಳಗೆ ಬಂದಿದ್ದರು ಮುಖ್ಯಮಂತ್ರಿಯವರ ಕ್ಷೇತ್ರದ ಎರಡು ಬಸ್ ಜನ. ದೂರದಿಂದ ಬಂದವರು ಪ್ರಯಾಣದ ಆಯಾಸ. ಬಸ್ ಇಳಿದ ಕೂಡಲೇ ಕೈಕಾಲು ಝಾಡಿಸಿ ವಿಶ್ರಮಿಸಿ ಕೊಳ್ಳುವ ಮನಸ್ಸು. ಮಹಿಳೆಯರಿಗಂತೂ ಮಕ್ಕಳ ಮೂತ್ರ ವಿಸರ್ಜನೆ ಮಾಡಿಸುವ ಕಾತುರ. ಜೊತೆಗೆ ಜಲಭಾದೆ ಅವಸರ.
ಇದೇ ಸಮಯಕ್ಕೆ ಮುಖ್ಯಮಂತ್ರಿಯವರ ಕಾರು ಕಾವೇರಿ ಪ್ರವೇಶಿಸಿತ್ತು. ಗಿಡಗಳ ಮತ್ತೆ ಪ್ರಕೃತಿ ಕರೆಗಾಗಿ ನಿಂತ ಕುಳಿತ ಹಳ್ಳಿಗರು. ಯಾರನ್ನು ತಡೆಯುವಂತಿಲ್ಲ. ತಡೆದರೂ ನಡೆಯುವಂತಿಲ್ಲ.
ಬಂಗಾರಪ್ಪನವರಿಗೆ ಈ ದೃಶ್ಯ ಕಂಡು ಎಲ್ಲಿಲ್ಲದ ಕೋಪ ಉಕ್ಕಿ ಬಂತು. ಅವರದ್ದು ತಪ್ಪಿಲ್ಲ ಮುಖ್ಯಮಂತ್ರಿಯ ಮನೆಯ ಮುಂದೆ ನಡೆಯಬಾರದ ಘಟನೆ ನಡೆದಿದ್ದೆಲ್ಲ ಕಂಡು ಬಂಗಾರಪ್ಪನವರು ಸಿಂಹ ಆವಾಹನೆಯಾದಂತೆ ಗರ್ಜಿಸಿದ್ದರು. ಕೆಂಡವಾದರು ಅವರು ಯಾರೂ ಏನೂ ಹೇಳುವಂತಿಲ್ಲ. ಸೊರಬದ ಬಂಧುಗಳಂತೂ ತಲೆತಗ್ಗಿಸಿ ನಿಂತಿದ್ದರು. ತಮ್ಮ ನೆಚ್ಚಿನ ನಾಯಕನ ಕೋಪ ಅವರನ್ನು ಕಂಗೆಡಿಸಿತ್ತು.
ಬಹುಶಃ ದಿಗ್ಬ್ರಾಂತ ಗೊಂಡ ಗ್ರಾಮ ನಿವಾಸಿಗಳು ತಲೆತಗ್ಗಿಸಿ ಬಸ್ಸಿನತ್ತ ಹೊರಡುತ್ತಿದ್ದಂತೆ ಕಂಡಿತು. ಬಂಗಾರಪ್ಪನವರು ಕೋಪದಿಂದ ಮಹಡಿ ಹತ್ತಿ ಹೊರಟು ಹೋಗಿದ್ದರು. ಇದ್ದ ಎರಡು ಮೃದು ಸೆಕ್ಯೂರಿಟಿ ಸಿಬ್ಬಂದಿಗೂ ದಿಕ್ಕು ತೋಚಲಿಲ್ಲ.
ಮಾನ್ಯ ಬಂಗಾರಪ್ಪನವರ ನಡೆನುಡಿ ತಿಳಿದಿದ್ದ ನಾನು ಮತ್ತು ನಟರಾಜನಿಗೆ ಇದು ಕ್ಷಣಮಾತ್ರದ ಕೋಪ ಎಂಬ ಅರಿವಿತ್ತು. ಕೂಡಲೇ ಬಸ್ ಕಡೆ ಹೊರಟ ಮಂದಿಗೆ ಸಮಾಧಾನ ಹೇಳಿ ತಾಳ್ಮೆಯಿಂದ ಬಸ್ಸಿನಲ್ಲಿಯೇ ಇರಲು ವ್ಯವಸ್ಥೆ ಮಾಡಿದೆವು. ಪರಸ್ಥಳದಿಂದ ಬಂದ ಬಂಗಾರಪ್ಪನವರ ಹಿತೈಷಿಗಳ ಯೋಗಕ್ಷೇಮ, ಊಟ-ತಿಂಡಿ ,ವಾಸ್ತವ್ಯ ಇವು ನಮ್ಮ ಆರೈಕೆಯಾಗಿತ್ತು.
ನಾವು ನಿರೀಕ್ಷಿಸಿದಂತೆಯೇ ಆಯಿತು. ಆಟವಾಡಿ ಬಂದ ಬಂಗಾರಪ್ಪ ತಣ್ಣನೆ ನೀರಿನ ಸ್ನಾನ ಮುಗಿಸಿ ಕೆಳಗಿಳಿದು ಬಂದಾಗ ಶಾಂತ ಮೂರ್ತಿಯಾಗಿದ್ದರು.
ನಮಗೆ ಸ್ಪಷ್ಟವಾಗಿ ಗೊತ್ತಿತ್ತು ಪಶ್ಚಾತ್ತಾಪದಿಂದ ನೊಂದಿದ್ದರು ಬಂಗಾರಪ್ಪ. ಅಂತೆಯೇ ಕರ್ತವ್ಯದ ಕಡೆಯಿಂದ ಎಚ್ಚರವಾಗಿದ್ದರು ಇದೆಲ್ಲ ನಡೆದಾಗ 9:30. ಇಷ್ಟರೊಳಗಾಗಿ ನಾನು ಮತ್ತು ನಟರಾಜ್ ಪಕ್ಕದಲ್ಲಿದ್ದ ಅಶೋಕ ಹೋಟೆಲ್ ನ ಮ್ಯಾನೇಜರ್ ಸಾಮ್ರಾಟ್ ನನ್ನು ಕಂಡು ಪರಿಸ್ಥಿತಿ ವಿವರಿಸಿ ಮುಖ್ಯಮಂತ್ರಿ ಅವರನ್ನು ಕಾಣಲು ಬಂದ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡಿದ್ದೆವು.ಆತ ಒಪ್ಪಿದ್ದ.
ಇತ್ತ ಬಂಗಾರಪ್ಪನವರ ‘ತಾಯಿಯ ಕರುಳು’ ಸ್ಪಷ್ಟವಾಗಿ ಅವರ ಮುಖ ಮಾತಿನಲ್ಲಿ ಪ್ರತ್ಯಕ್ಷವಾಗಿತ್ತು.”ಅವರೆಲ್ಲರ ರಾತ್ರಿ ಊಟ ವಸತಿ ಸೌಕರ್ಯ ಇದು ಮುಖ್ಯ” ಎಂದರು ಬಂಗಾರಪ್ಪ. ಮುಖ್ಯಮಂತ್ರಿಯ ಮಾತು ಎಂದರೆ ಆಜ್ಞೆ -ಇದ್ದಂತೆ ಎಲ್ಲಾ ವ್ಯವಸ್ಥೆ ಆಗಿತ್ತು.
ಇಲ್ಲಿ ನಾವು ಗುರುತಿಸಬೇಕಾದ ಗುಣವೆಂದರೆ, ಬಂಗಾರಪ್ಪನವರಿಗೆ ಇದ್ದ ಹೃದಯ ವೈಶಾಲ್ಯತೆ. ಬಡವರು, ಅಶಕ್ತರು, ದೀನರು, ದಲಿತರು – ಹೀಗೆ ಬಡವರನ್ನು ಕಂಡರೆ ಅವರಲ್ಲಿದ್ದ ಅಕ್ಕರೆ ಮತ್ತು ದಾನ-ಧರ್ಮ ಮನೋಭಾವ ಅಪಾರವಾಗಿತ್ತು.
ಬಂಗಾರಪ್ಪನವರ ದಾನ ಹೇಗಿತ್ತೆಂದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ. ನನ್ನನ್ನು ಸೇರಿ ಆಪ್ತರಿಗೆ ಜೇಬಿನಲ್ಲಿದ್ದುದನ್ನೆಲ್ಲ ಸುರಿದು ಪ್ರವಾಸ ಸಮಯದಲ್ಲಿ ದಾನ ಮಾಡುತ್ತಿದ್ದ ಕಲಿಯುಗ ಕರ್ಣ ಇವರು.
ಅಂದು ಸಂಜೆ ನಡೆದಿದ್ದೆ ಹೀಗೆಯೇ. ರಾತ್ರಿ ಸುಮಾರು 10.30 ಸಮಯದಲ್ಲಿ ಅಶೋಕ ಐಷಾರಾಮಿ ಹೋಟೆಲ್ ನ ಸ್ವಿಮಿಂಗ್ ಫೂಲ್ ಸುತ್ತ ಕುಳಿತ ಸೊರಬ ದ ಹಿತೈಷಿಗಳಿಗೆ ಕೈಯಾರೆ ಊಟ ಬಡಿಸಿ ತಮ್ಮ ತಾಳ್ಮೆ ತಪ್ಪಿದ ನಡವಳಿಕೆಗಾಗಿ ಕೈಮುಗಿದು ಕ್ಷಮೆಯಾಚಿಸಿದ್ದರು, ಕರ್ನಾಟಕದ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...