
ತೈಲ ಬೆಲೆ ಏರಿಕೆ ಅಗತ್ಯ ವಸ್ತುಗಳ ಧಾರಣೆ ಏರಿಕೆಗೆ ಕಾರಣ
ಲೇ :ಪ್ರೊ.ಬಿ.ಎಂ. ಕುಮಾರಸ್ವಾಮಿ , ಶಿವಮೊಗ್ಗ
ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಳೆದ ಏಳು ಎಂಟು ತಿಂಗಳಿಂದ ವೇಗವಾಗಿ ಏರುತ್ತಿದೆ. ಅದರ ನೇರ ಪರಿಣಾಮವಾಗಿ ಎಲ್ಲ ಅಗತ್ಯ ವಸ್ತುಗಳ ಧಾರಣೆಗಳು ಏರುತ್ತಿವೆ ಜನಜೀವನ ಜರ್ಜರಿತವಾಗುತ್ತಿದೆ.
ತೈಲ ಬೆಲೆ ಏಕೆ ಏರುತ್ತಿದೆ?
ತೈಲ ಬೆಲೆ ಏರಿಕೆಗೆ ಮುಖ್ಯ ಮೂರು ಕಾರಣಗಳಿವೆ
*ಕಚ್ಚಾತೈಲದ ಬೆಲೆ ಏರಿಕೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರುತ್ತಿದೆ. 2020 ರ ಎಪ್ರಿಲ್ ನಲ್ಲಿ ಕಚ್ಚಾತೈಲದ ಬೆಲೆ 1ಬ್ಯಾರಲ್ ಗೆ (159 ಲೀಟರ್) 9 ಡಾಲರ್ ಇತ್ತು. 2021 ರ ಸೆಪ್ಟೆಂಬರ್ ಗೆ ಅದು 74.79 ಡಾಲರ್ ಆಗಿದೆ. ಅಕ್ಟೋಬರ್ 18 ರಂದು 84.84 ಡಾಲರ್ ಮುಟ್ಟಿತ್ತು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಇದು ಒಂದು ಕಾರಣ.
ರೂಪಾಯಿ ಡಾಲರ್ ವಿನಿಮಯ ದರ ಕುಸಿತ
ರೂಪಾಯಿನ ಡಾಲರ್ ವಿನಿಮಯ ದರ ಕುಸಿತ ಇನ್ನೊಂದು ಕಾರಣ. ಈ ವರ್ಷದ ಅಕ್ಟೋಬರ್ 4 ರಂದು ಡಾಲರ್ ಗೆ ರೂಪಾಯಿ 74.31 ಇದ್ದ ವಿನಿಮಯ ದರ 13 ರಂದು ಡಾಲರ್ ಗೆ ರೂಪಾಯಿ 75.26 ದಾಟಿ ಹೋಗಿದೆ. ಡಾಲರ್ ದುಬಾರಿಯಾದಂತೆ ಆಮದಾಗುವ ಕಚ್ಚಾ ತೈಲದ ಬೆಲೆಯೂ ರುಪಾಯಿ ನಲ್ಲಿ ಸಹಜವಾಗಿ ಏರುತ್ತಿದೆ.
ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ
ಪೆಟ್ರೋಲ್ ಡೀಸೆಲ್ ದರಗಳ ವಿಪರೀತ ಏರಿಕೆಗೆ ಮೂರನೆಯ ಹಾಗೂ ಅತ್ಯಂತ ಪ್ರಮುಖ ಕಾರಣ, ತೆರಿಗೆಗಳು. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಡೀಸೆಲ್ ಮೇಲೆ ಬೇರೆ ಬೇರೆ ತೆರಿಗೆಗಳನ್ನು ವಿಧಿಸುತ್ತವೆ. ಕೇಂದ್ರ ಸರ್ಕಾರ ಎಕ್ಸೈಸ್ ಡ್ಯೂಟಿ ಹಾಕಿದರೆ, ರಾಜ್ಯ ಸರ್ಕಾರಗಳು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಹಾಕುತ್ತವೆ. ಅದರದರ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ. ತೈಲ ಬೆಲೆಯ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಹೊರೆ ಎಷ್ಟಿದೆ ಎಂದರೆ, ಬೆಲೆಯ ಶೇ.60 ಪಾಲು ತೆರಿಗೆಯೇ. ಪೆಟ್ರೋಲಿಯಂ ಸಚಿವಾಲಯದ ವರದಿಯ ಪ್ರಕಾರ 2014 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಮೂಲ ಬೆಲೆಯ ಶೇಕಡ 34 ರಷ್ಟಿತ್ತು. ಫೆಬ್ರುವರಿ 2021 ರ ಹೊತ್ತಿಗೆ ತೆರಿಗೆ ಹೊರೆ ಶೇ. 60 ಕ್ಕೆ ಏರಿತ್ತು ( ಕೇಂದ್ರ ತೆರಿಗೆ ಶೇ. 37 ಹಾಗೂ ರಾಜ್ಯ ತೆರಿಗೆ ಶೇಕಡ 23).
ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ದರ ಕಡಿಮೆ ಮಾಡುವುದು ಒಂದೇ ದಾರಿ.
ಪೆಟ್ರೋಲ್ ಡೀಸೆಲ್ ಪ್ರಧಾನ ಸಾರಿಗೆ ಇಂಧನಗಳಾಗಿದ್ದರಿಂದ ಅವುಗಳ ಬೆಲೆ ಏರಿಕೆಯೇ ಸಕಲ ಸರಕು-ಸೇವೆಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಅಗತ್ಯ ವಸ್ತುಗಳ ಬೆಲೆ ಏರುತ್ತಿರುವುದಕ್ಕೆ ತೈಲ ಬೆಲೆ ಏರಿಕೆ ಪ್ರಮುಖ ಕಾರಣ ಎನ್ನಬಹುದು.
ಪೆಟ್ರೋಲ್ ಡಿಸೇಲ್ ಗಳ ತೆರಿಗೆಯನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ಪ್ರಾರಂಭವಾಗಿದೆ. ಜಿ.ಎಸ್ ಟಿ ಯಲ್ಲಿ ಅತಿ ಹೆಚ್ಚಿನ ತೆರಿಗೆ ದರ ಶೇಕಡಾ 28. ಐಷಾರಾಮಿ ವಸ್ತುಗಳ ಮೇಲೆ ಈ ತೆರಿಗೆ ವಿಧಿಸಲಾಗುತ್ತದೆ. ಪೆಟ್ರೋಲ್ ಡೀಸೆಲ್ ಗೆ ತೆರಿಗೆ ವಿಧಿಸಿದರೂ ಸಹ ಅವುಗಳ ಬೆಲೆ ಶೇಕಡ 50ರಷ್ಟು ಕಡಿಮೆಯಾಗುತ್ತದೆ.
ಆದರೆ ಇದಕ್ಕೆ ಕೇಂದ್ರ ಸರಕಾರವಾಗಲೀ, ಯಾವುದೇ ರಾಜ್ಯ ಸರ್ಕಾರವಾಗಲೀ ಸಿದ್ಧವಿಲ್ಲ. ಕಾರಣ ಎರಡೂ ಸರ್ಕಾರಗಳಿಗೆ ಅದು ಪ್ರಮುಖ ಆದಾಯ ಮೂಲ.
2020 – 21 ರಲ್ಲಿ ಕೇಂದ್ರಕ್ಕೆ ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಡ್ಯೂಟಿಯಿಂದ ಬಂದ ಆದಾಯ 3.35 ಲಕ್ಷ ಕೋಟಿ ರೂಪಾಯಿ. 2019 -20 ರಲ್ಲಿ ಕೇವಲ 1.78 ಲಕ್ಷ ಕೋಟಿ ರೂಪಾಯಿ.
ಕರ್ನಾಟಕ ಸರ್ಕಾರಕ್ಕೆ ತೆರಿಗೆಯಿಂದ 2020- 21 ರ ಮೊದಲ ಆರು ತಿಂಗಳಲ್ಲಿ ಬಂದ ಆದಾಯ ರೂಪಾಯಿ 6,492 ಕೋಟಿ. 2021 22 ರ ಇದೇ ಅವಧಿಯಲ್ಲಿ ರೂಪಾಯಿ 9,723 ಕೋಟಿ ಆದಾಯ ಬಂದಿದೆ.
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?