ಟಿಕೆಟ್ ಟಿಕೆಟ್ ಎಂದು ರಾಜ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದ ಯುವಕನೊಬ್ಬ ಭಾರೀ ಬೇಡಿಕೆಯ ತಾರೆಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆತ್ಮೀಯರಾಗಿದ್ದ ಸಹೋದ್ಯೋಗಿ ತನ್ನ ಕಂಡಕ್ಟರಿಗೆ ನೀನು ಸಿನಿಮಾಗೆ ಸೇರು ನಿನಗೆ ನಟನೆಯಲ್ಲಿ ಆಸಕ್ತಿ ಇದೆ ಎಂದು ಸಲಹೆ ನೀಡಿದ. ಆ ಸಲಹೆ ಕಂಡಕ್ಟರ್ ಮಿತ್ರನ ಬದುಕನ್ನೇ ಬದಲಿಸಿತು. ಆ ಸಹೋದ್ಯೋಗಿ ಮಿತ್ರರೇ ರಾಜ್ ಬಹುದ್ದೂರ್ ಮತ್ತು ಇಂದಿನ ಸೂಪರ್ ಸ್ಟಾರ್ ರಜನಿಕಾಂತ್.
ಆಗ ಬಸ್ ಕಂಡಕ್ಟರ್ ಇಂದಿನ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಇಂದಿಗೂ ಅವರ ಸಿನಿಮಾಗಳಿಗೆ ನಿರ್ಮಾಪಕರು ಕೋಟಿಗಟ್ಟಲೆ ಬಂಡವಾಳ ಹಾಕಲು ಮುಗಿಬೀಳುತ್ತಾರೆ.
ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಲನಚಿತ್ರ ನಟನೆ ಮತ್ತು ಚಿತ್ರರಂಗದಲ್ಲಿ ಅಪಾರ ಸೇವೆಯನ್ನು ಪರಿಗಣಿಸಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೋಮವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಮಾನ್ಯ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ ಧನ್ಯತಾಭಾವ ವ್ಯಕ್ತಪಡಿಸಿದರು. ಅವರು ನಟಿಸಿದ ಮೊದಲ ಚಿತ್ರ ‘ಅಪೂರ್ವ ರಾಗಂಗಳ್’ ನಿರ್ದೇಶಿಸಿದ ದಿವಂಗತ ಚಲನಚಿತ್ರ ನಿರ್ಮಾಪಕ ಕೆ.ಬಾಲಚಂದರ್, ಸಹೋದರ ಸತ್ಯನಾರಾಯಣರಾವ್, ರಜನಿಕಾಂತ್ ಅಭಿನಯಿಸಿರುವ ಎಲ್ಲಾ ಚಿತ್ರದ ನಿರ್ದೇಶಕರು, ನಿರ್ಮಾಪಕರು ಥಿಯೇಟರ್ ಮಾಲೀಕರು ತಂತ್ರಜ್ಞರು ಮತ್ತು ತಮಗೆ ಜೀವ ನೀಡಿದ ತಮಿಳು ಜನತೆಗೆ ಧನ್ಯವಾದ ಅರ್ಪಿಸಿದರು.
ಇಂತಹ ಮೇರು ನಟ ತನ್ನ ವೃತ್ತಿಬದುಕಿನ ಪೂರ್ವಾರ್ಧವನ್ನು ಕನ್ನಡ ನೆಲದಲ್ಲಿ ಕಳೆದರು ಎಂದು ನಮ್ಮ ಕನ್ನಡಿಗರಲ್ಲಿ ಹೆಮ್ಮೆ ಇದೆ. ಕನ್ನಡ ಚಿತ್ರರಂಗದಲ್ಲು ಕಥಾಸಂಗಮ, ಸಹೋದರರ ಸವಾಲ್, ತಪ್ಪಿದ ತಾಳ, ಕುಂಕುಮ ರಕ್ಷೆ, ಗಲಾಟೆ ಸಂಸಾರ ಮುಂತಾದ ಚಿತ್ರಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ.
ಒಟ್ಟಾರೆ ರಜನಿಕಾಂತ್ ಅಸಾಧಾರಣ ಕಲಾವಿದ. ತನ್ನ ಅಭಿನಯದ ಚಾಣಾಕ್ಷತೆ, ಆಂಗಿಕ ಭಂಗಿ, ಮಿಂಚಿನ ಚಾಕಚಕ್ಯತೆ ಮುಂತಾದವು ಅವರ ಚಿತ್ರರಂಗದ ವಿಶಿಷ್ಟ, ಅನನ್ಯ, ಏಕಮೇವ ನಟನೆ ಅವರದು. ಹೀಗಾಗಿ ತಮಿಳಿನಲ್ಲಿ ತಲೈವ ಎಂದೇ ಜನಜನಿತರಾಗಿದ್ದಾರೆ. ಇತಂಹ ಅಭಿಜಾತ ಕಲಾವಿದನಿಗೆ ನಮ್ಮೆಲ್ಲರ ಅಭಿನಂದನೆಗಳು.