ಸುಮಾರು ಒಂದುವರೆ ವರ್ಷಗಳವರೆಗೂ ಶಾಲಾ ವಾತಾವರಣ ಸ್ತಬ್ಧವಾಗಿತ್ತು. ಈಗ ಒಂದರಿಂದ ಐದನೇ ತರಗತಿಯವರೆಗೆ ಭೌತಿಕ ತರಗತಿಗಳು ನಿನ್ನೆಯಿಂದ ರಾಜ್ಯದ್ಯಂತ ಆರಂಭಗೊಂಡಿವೆ. ಬರಿದಾದ ಗೂಡಿಗೆ ಹಕ್ಕಿಗಳು ಹಾರಿಬಂದಂತೆ ಶಾಲಾ ವಾತಾವರಣದಲ್ಲಿ ಚಿಲಿಪಿಲಿ ಶುರುವಾಗಿದೆ.
ಶಾಲೆಗಳ ಆವರಣದಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ. ಹಲವು ಶಾಲೆಗಳಲ್ಲಿ ಪ್ರವೇಶದ್ವಾರವನ್ನು ತಳಿರು-ತೋರಣಗಳಿಂದ ಅಲಂಕೃತ ಗೊಳಿಸಲಾಗಿತ್ತು. ಬಣ್ಣ ಬಣ್ಣದ ಬಲೂನುಗಳು ಆಕಾಶದಲ್ಲಿ ಚಿಮ್ಮುತ್ತಿದ್ದವು. ಶಾಲೆಯ ಅಂಗಳದ ರಂಗೋಲಿಯಿಂದ ಶೋಭಿಸುತ್ತಿತ್ತು. ಉತ್ಸುಕತೆಯಿಂದ ಬಂದ ಮಕ್ಕಳಿಗೆ ಶಾಲಾವೃಂದವು ಹೂವು ಮತ್ತು ಸಿಹಿಯನ್ನು ನೀಡಿ ಬರಮಾಡಿಕೊಂಡಿತು.
ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಮಾತ್ರ ಭೌತಿಕ ತರಗತಿಗಳನ್ನು ನಡೆಸಲಾಯಿತು. ಮೊದಲ ದಿನ ಶೇ. 55 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಕೋವಿಡ್, ಲಾಕ್ ಡೌನ್ ನಿಂದ ಹುಟ್ಟಿಕೊಂಡ ಆರ್ಥಿಕ ಸಂಕಷ್ಟದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸಲು ಒತ್ತು ನೀಡಿರುವುದು ಕಂಡುಬಂದಿದೆ. ಈ ವರ್ಷ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 2.35 ಲಕ್ಷ (ಶೇ.5.36) ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚುತ್ತಿರುವುದು ಸಂತೋಷದ ವಿಷಯವಾದರೂ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ಮೂಲ ಸೌಕರ್ಯಗಳ ಕೊರತೆಯನ್ನು ತುಂಬುವುದು ಸವಾಲಿನ ಕೆಲಸವೇ ಆಗಿದೆ. ಸರ್ಕಾರವು ಶೀಘ್ರವಾಗಿ ಶಾಲಾ ಕಟ್ಟಡ ನಿರ್ವಹಣೆ ಮತ್ತು ಶಿಕ್ಷಕರ ನೇಮಕಾತಿ ಬಗ್ಗೆ ಗಮನಹರಿಸಿ ಈಗಿರುವ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕಿದೆ.
ಶಾಲೆ ಎಂಬ ಗೂಡಿಗೆ ಹಾರಿ ಬಂದ ಹಕ್ಕಿಗಳು
Date: