ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿನ ಎಲ್ಲಾ ಪ್ರಯೋಜನಗಳನ್ನು ಮೀನುಗಾರರಿಗೂ ನೀಡಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಎಲ್ ಮುರುಗನ್ ತಿಳಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಯೋಜನೆಯಾಗಿದೆ. ಇದರ ಮೂಲಕ ರೈತರು ಸಕಾಲದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯನ್ನು 1998 ರಲ್ಲಿ ಪ್ರಾರಂಭಿಸಲಾಯಿತು. ರೈತರಿಗೆ ಸಕಾಲದಲ್ಲಿ ಅಲ್ಪಾವಧಿ ಸಾಲ ನೀಡುವುದು ಇದರ ಉದ್ದೇಶವಾಗಿದೆ. ಈಗ ಈ ಸೌಲಭ್ಯವನ್ನು ಶೀಘ್ರವೇ ಮೀನುಗಾರರಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆ ಸಹಾಯಕ ಸಚಿವ ಎಲ್. ಮುರುಗನ್ ಹೇಳಿದ್ದಾರೆ.
ಎಲ್ಲ ರೈತರು ಅಥವಾ ಜಂಟಿ ರೈತರು, ಗುತ್ತಿಗೆ ರೈತರು, ಹತ್ತು ರೈತರು ಒಳಗೊಂಡಿರುವ ಜಂಟಿ ಹೊಣೆಗಾರಿಕೆ ಗುಂಪುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಬಹುದಾಗಿದೆ. ಇವರು ಒಂದು ಅವಧಿಯಲ್ಲಿ ಗರಿಷ್ಠ ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಕೆಸಿಸಿ ಸಾಲ ಪಡೆದ ರೈತರ ಬೆಳೆಗಳಿಗೆ ಬೆಳೆ ವಿಮೆ ಕೂಡ ಲಭ್ಯವಿರುತ್ತದೆ. ಈಗ ಎಲ್ಲ ಸೌಲಭ್ಯಗಳನ್ನು ಮೀನುಗಾರರಿಗೂ ಕಲ್ಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
“ಕಡಲ ಆಹಾರ ರಪ್ತು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಅಂತರಾಷ್ಟ್ರೀಯ ಗುಣಮಟ್ಟ ಹಾಗೂ ಅತ್ಯಾಧುನಿಕ ಸಂಸ್ಕರಣಾ ಘಟಕಗಳೊಂದಿಗೆ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದರು.
ಮೀನುಕೃಷಿಕರಿಗೂ ಈಗ ಕಿಸಾನ್ ಕಾರ್ಡ್
Date: