ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಗಾಂಜಾ ಹಾವಳಿ ಹೆಚ್ಚಾಗಿದ್ದು, ಯುವ ಸಮೂಹ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ. ಇದರಲ್ಲಿ ಬಹುಪಾಲು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಶಿವಮೊಗ್ಗ ನಗರದ ಎಲ್ಲಾ ಕಡೆಗಳಲ್ಲಿಯೂ ಗಾಂಜಾ ದೊರೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಶಾಲೆಗಳು ಪ್ರಾರಂಭ ವಾಗದೇ ಇದ್ದುದ್ದರಿಂದ ಶಾಲಾ-ಕಾಲೇಜುಗಳ ಮೈದಾನದಲ್ಲಿ ಗುಂಪು-ಗುಂಪಾಗಿ ಗಾಂಜಾ ಸೇವನೆ ಮತ್ತು ಮಾರಾಟದ ಅವ್ಯಾವಹತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿದೆ. ಅಲ್ಲದೆ ಇನ್ನೂ ಅಭಿವೃದ್ಧಿಯಾಗದೇ ಇರುವ ಬಡಾವಣೆಗಳ ಖಾಲಿ ನಿವೇಶನದಲ್ಲಿ ಸಹ ಇದೇ ವಾತಾವರಣ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ನಗರದ ಕೃಷಿ ಕಾಲೇಜು ಹತ್ತಿರ ಇರುವ ಬಡಾವಣೆಗಳಲ್ಲಿ ಪರಸ್ಥಳದ ವಿದ್ಯಾರ್ಥಿಗಳು ಹಾಗೂ ಯುವಕರು ಬಹು ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದು ಕಂಡುಬರುತ್ತಿದೆ.
ಗಾಂಜಾ ಸೇವನೆಯ ಮತ್ತಿನಲ್ಲಿ ಯುವಕರ ಗುಂಪು ದಾರಿಹೋಕರ ಮೇಲೆ ಹಲ್ಲೆಗೈಯುತ್ತಿದೆ. ಜನರ ಬಳಿ ಇರುವ ಬೆಲೆಬಾಳುವ ವಸ್ತುಗಳನ್ನು ದೋಚುತ್ತಾರೆ. ಪ್ರತಿಭಟಿಸಿದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಾರೆ.ಇಂತಹ ಘಟನೆಗಳು ಪ್ರತಿದಿನ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಎಲ್ಲಾ ಗಂಭೀರ ಸಂಗತಿಗಳನ್ನು ವಿಧಾನಪರಿಷತ್ತಿನ ಗೌರವಾನ್ವಿತ ಸದಸ್ಯರಾದ ಶ್ರೀ ಆಯನೂರು ಮಂಜುನಾಥ ಅವರು
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಗಮನ ಸೆಳೆದಿದ್ದಾರೆ. ಶೀಘ್ರ ಕ್ರಮ ತೆಗೆದುಕೊಳ್ಳಲುವಂತೆ ಒತ್ತಾಯಿಸಿದ್ದಾರೆ.