ದುರ್ಗಾಷ್ಟಮಿಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ಪ್ರಗತಿ ಮೈದಾನದ ನ್ಯೂ ಎಕ್ಸಿಬಿಶನ್ ಕಾಂಪ್ಲೆಕ್ಸ್ ನಲ್ಲಿ ಗತಿ ಶಕ್ತಿ ಯೋಜನೆಯನ್ನು ಉದ್ಘಾಟಿಸಿದರು.
ಪ್ರಧಾನಿಯವರು ತಮ್ಮ ಉದ್ಘಾಟನಾ ನುಡಿಗಳನ್ನಾಡುತ್ತ “ಶಕ್ತಿ ದೇವತೆಯ ಆರಾಧನೆಯಂದು ಆರಂಭಗೊಂಡ ಗತಿ ಶಕ್ತಿ ಯೋಜನೆಯು ಅಷ್ಟೇ ಹೊಸ ಶಕ್ತಿಯನ್ನು ಪಡೆದುಕೊಂಡಿದೆ. ಇಂತಹ ಪವಿತ್ರವಾದ ದಿನ ಆರಂಭಗೊಂಡಿರುವ ಯೋಜನೆಯಿಂದ ದೇಶವು ಪ್ರಗತಿ ಹೊಂದುವುದರಲ್ಲಿ ಸಂದೇಹವಿಲ್ಲ. ಆತ್ಮ ನಿರ್ಭರ ಭಾರತ ಯೋಜನೆಯಿಂದ ಮುಂದಿನ 25 ವರ್ಷಗಳ ಪ್ರಗತಿಯ ಬೆಳವಣಿಗೆಗೆ ಇದು ಅಡಿಪಾಯ ಆಗಿದೆ” ಎಂದರು.
21ನೇ ಶತಮಾನದ ನವ ಭಾರತಕ್ಕೆ ಗತಿ ಶಕ್ತಿಯು ಒಂದು ದಿಕ್ಸೂಚಿ ಯೋಜನೆಯಾಗಿದೆ. ಭಾರತೀಯ ಉದ್ಯಮಗಳು, ವ್ಯವಹಾರ, ಭಾರತೀಯ ಕೈಗಾರಿಕಾ ಉತ್ಪಾದಕರು, ಕೃಷಿಕರು, ಮತ್ತು ಭಾರತೀಯ ಪ್ರಜೆಗಳ ಹಿತದೃಷ್ಟಿಯನ್ನು ಈ ಯೋಜನೆಯು ಒಳಗೊಂಡಿದೆ. ಈ ಎಲ್ಲ ಸಮುದಾಯದ ಅಭಿವೃದ್ಧಿಗೆ ಅಡ್ಡಗಾಲಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದು ಗತಿ ಶಕ್ತಿ ಯೋಜನೆ ಪರಮೋದ್ದೇಶ.
ಇಲ್ಲಿಯವರೆಗೆ ನಡೆದುಬಂದ ಪ್ರಗತಿಯ ಬೆಳವಣಿಗೆಯು ವಿಶ್ವಾಸದ ಕೊರತೆಯಿಂದ ನಿಧಾನಗತಿಯಲ್ಲಿತ್ತು. ಪ್ರಗತಿಯು ತೀವ್ರ ವೇಗ ಪಡೆದುಕೊಳ್ಳಬೇಕು ಮತ್ತು ಸ್ವಯಂ ಉತ್ಸಾಹ, ಸಂಘಟಿತ ಪ್ರಯತ್ನ ವಾಗಿರಬೇಕು. 21ನೇ ಶತಮಾನದ ಭಾರತವು ಹಳೆಯ ವ್ಯವಸ್ಥೆ ಮತ್ತು ಅಭ್ಯಾಸಗಳಿಂದ ವಿಮುಖವಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟರು.
ಪ್ರಧಾನಮಂತ್ರಿ ಅವರು ಹೇಳಿದ ಪ್ರಗತಿ ಮಂತ್ರ ಹೀಗಿವೆ : ಪ್ರಗತಿಗಾಗಿ ಕೆಲಸ, ಸಂಪತ್ತಿಗಾಗಿ ಪ್ರಗತಿ, ಪ್ರಗತಿಗಾಗಿ ಯೋಜನೆ, ಮತ್ತು ಪ್ರಗತಿಗಾಗಿ ಎಲ್ಲಾ ಆದ್ಯತೆ.
ಮುಂದುವರಿದು ಮಾತನಾಡಿದ ಪ್ರಧಾನಿ ಶ್ರೀ ಮೋದಿಯವರು ನಾವು ಕಾರ್ಯ ಪ್ರವೃತ್ತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದು, ಅವುಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುತ್ತಿದ್ದೆವೆ.ಆದರೆ ಎಲ್ಲಾ ಯೋಜನೆಗಳನ್ನು ನಿಗದಿತ ಅವಧಿಗಿಂತ ಮುಂಚೆ ಮುಗಿಸುವಲ್ಲಿ ಪ್ರಯತ್ನಶೀಲರಾಗಿದ್ದೆವೆ ಎಂದರು.
ಗತಿ ಶಕ್ತಿಯು ಬೃಹತ್ತ್ ಯೋಜನೆಯಾಗಿದ್ದು, ಮಂಜೂರಾಗಿರುವ ಅಂದಾಜು ವೆಚ್ಚವನ್ನು ಸಾರ್ಥಕವಾಗಿ ಬಳಸುವುದೇ ಆಗಿದೆ. ತಾವು 2014ರಲ್ಲಿ ಪ್ರಧಾನ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಾಗ ಇಂತಹ ತಡೆ ಗೊಂಡಿದ್ದ ನೂರಾರು ಯೋಜನೆಗಳನ್ನು ಪರಿಶೀಲಿಸಲಾಯಿತು. ಎಲ್ಲ ಯೋಜನೆಗಳನ್ನು ಒಂದೇ ವೇದಿಕೆಗೆ ತಂದು ಅಡೆತಡೆಗಳನ್ನು ದೂರ ಮಾಡಲು ಪ್ರಯತ್ನಿಸಲಾಯಿತು. ಈ ಎಲ್ಲಾ ಯೋಜನೆಗಳನ್ನು ಯಶಸ್ವಿಗೊಳಿಸಲು ಸರ್ವಪ್ರಯತ್ನಗಳನ್ನು ತಮ್ಮ ಸರ್ಕಾರ ಕೈಗೊಂಡಿರುವ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಶ್ರೀ ಪಿಯುಷ್ ಗೊಯಲ್, ಶ್ರೀ ಹರ್ದೀಪ್ ಸಿಂಘ್ ಪುರಿ, ಶ್ರೀ ಸರ್ಭಾನಂದ ಸೊನೊವಾಲ್, ಶ್ರೀ ಜ್ಯೋತಿರಾಧಿತ್ಯ ಸಿಂಧಿಯಾ, ಶ್ರೀ ಅಶ್ವಿನಿ ವೈಷ್ಣವ್, ಮತ್ತು ಆರ್.ಕೆ. ಸಿಂಗ್ ಮುಂತಾದ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.