Saturday, November 23, 2024
Saturday, November 23, 2024

ಶೃಂಗೇರಿ ದಸರಾ ವೈಶಿಷ್ಟ್ಯತೆ – ಡಾ.ಪ್ರಶಾಂತ್ ಶೃಂಗೇರಿ, ಮೈಸೂರು.

Date:

ಭಾರತದಾದ್ಯಂತ ಒಂಬತ್ತು ದಿನಗಳ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ಸರ್ವೇಸಾಮಾನ್ಯವಾದ ವಿಚಾರ. ಕರ್ನಾಟಕದಲ್ಲಿ ಶೃಂಗೇರಿ ದಸರಾ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಸಾಧಾರಣವಾಗಿ ಶೃಂಗೇರಿ ದಸರಾ ವಿವರಣೆಗಳನ್ನು ಮಾಧ್ಯಮದವರು ನೀಡುವಾಗ ಧಾರ್ಮಿಕ ಆಚರಣೆಗಳನ್ನು ಮಾತ್ರ ಕೇಂದ್ರೀಕರಿಸುತ್ತಾರೆ. ಶೃಂಗೇರಿ ಮಠವನ್ನು ಧಾರ್ಮಿಕ-ಸಾಮಾಜಿಕ ಪಾರಂಪರಿಕ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ವಿತರಿಸಬಹುದಾಗಿದೆ.

ಶೃಂಗೇರಿ ಗುರುಪರಂಪರೆಯ 12ನೇ ಗುರುಗಳಾಗಿದ್ದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು ವಿಜಯನಗರ ಮಹಾಸಾಮ್ರಾಜ್ಯ ನಿರ್ಮಾಣದಲ್ಲಿ ವಹಿಸಿದ ಪಾತ್ರದಿಂದ 14ನೇ ಶತಮಾನದಲ್ಲಿ ಶೃಂಗೇರಿ ಮಠಕ್ಕೆ ಅಪಾರವಾದ ಗೌರವ ಪ್ರಾಪ್ತಿಯಾಯಿತು. ಪರಕೀಯ ಶಕ್ತಿಗಳಿಂದ ಭಾರತೀಯ ಸಂಸ್ಕೃತಿ ಧರ್ಮ ಗಳಿಗೆ ಧಕ್ಕೆ ಉಂಟಾಗಿ ಅರಾಜಕತೆ ಉಂಟಾಗಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ಮೌಲ್ಯಗಳ ಸಂರಕ್ಷಣೆಯ ಪಣತೊಟ್ಟ ಸಂಗಮ ಸಹೋದರರಾದ ಹಕ್ಕ-ಬುಕ್ಕರು ಮಾತಂಗ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀ ವಿದ್ಯಾರಣ್ಯರ ಮರೆ ಹೊಕ್ಕು ಅವರ ಕೃಪಾರ್ಶೀವಾದ ಪಡೆದರು. ಶ್ರೀ ವಿದ್ಯಾರಣ್ಯರ ಮಾರ್ಗದರ್ಶನದಿಂದ 1336ರಲ್ಲಿ ವಿಜಯನಗರವೆಂಬ ಮಹಾಸಾಮ್ರಾಜ್ಯ ನಿರ್ಮಿಸಿ ಅದಕ್ಕೆ ಗುರು ವಿದ್ಯಾರಣ್ಯರ ಸ್ಮರಣಾರ್ಥ “ವಿದ್ಯಾನಗರ” ಎಂದು ನಾಮಕರಣ ಮಾಡಿದರು. ಶೃಂಗೇರಿ ಮಠದ ಶ್ರೀ ವಿದ್ಯಾರಣ್ಯರ ಆಶೀರ್ವಾದದಿಂದಲೇ ತಮಗೆ ಸಿಂಹಾಸನ ಪ್ರಾಪ್ತಿಯಾಯಿತು ಎಂದು ವಿದ್ಯಾರಣ್ಯರ ಬಲವನ್ನು ವರ್ಣಿಸುವ ನೂರಾರು ಶಾಸನಗಳು ಇಂದಿಗೂ ಶೃಂಗೇರಿ ಮಠ ಮತ್ತು ವಿಜಯನಗರ ಸಾಮ್ರಾಜ್ಯದ ಗುರು-ಶಿಷ್ಯ ಸಂಬಂಧವನ್ನು ಸಾರುತ್ತದೆ. ವಿಜಯನಗರದ ದೊರೆಗಳು ವಿದ್ಯಾರಣ್ಯರಿಗೆ “ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ “ಎಂದು ಬಿರುದಿನಿಂದ ಗೌರವಿಸಿದರು. ಹರಿಹರ ಬುಕ್ಕ ರಾಯರು ವಿದ್ಯಾರಣ್ಯ ರನ್ನು ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ ಕರೆತಂದು ಗೌರವಿಸಿದರೆಂದು ಇಂದಿಗೂ ಹಂಪಿಯ ವಿರೂಪಾಕ್ಷ ದೇವಾಲಯದ ಛಾವಣಿಯಲ್ಲಿರುವ ಸುಮಾರು 30 ಅಡಿ ಬಿತ್ತಿಚಿತ್ರ ಸಾರುತ್ತಿದೆ. ವಿಜಯನಗರದ ವೈಭವವನ್ನು ಸಾರುವ ಕಲೆ- ಸಾಹಿತ್ಯ, ಸಂಗೀತ, ಸಂಸ್ಕೃತಿ, ಪರಂಪರೆಗಳ ಉತ್ಸವ ವಿದ್ಯಾರಣ್ಯರ ಮಾರ್ಗದರ್ಶನದಿಂದ ವಿಜಯನಗರದ ರಾಜರು ಆರಂಭಿಸಿದರು. ಹಂಪಿಯ ಮಹಾನವಮಿ ದಿಬ್ಬದ ಮೇಲೆ ನಡೆಯುತ್ತಿದ್ದ ವೈಭವೋಪೇತ ಕಾರ್ಯಕ್ರಮದ ಉತ್ಸವ ನಮ್ಮ ನಾಡಿನ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿತ್ತು. ವಿಜಯನಗರದ ದೊರೆಗಳು ತಮ್ಮ ವಿಜಯೋತ್ಸವದ ಸಂತೋಷದಲ್ಲಿ ಶೃಂಗೇರಿ ಮಠಕ್ಕೆ ಭೂದಾನವನ್ನು ಮಾಡಿದರು. ಗುರು ವಿದ್ಯಾಶಂಕರ ಅದ್ವಿತೀಯ ದೇವಾಲಯವನ್ನು ಶೃಂಗೇರಿ ಮಠದಲ್ಲಿ ಕಟ್ಟಿಸಿಕೊಟ್ಟರು. ಶೃಂಗೇರಿ ಮಠಕ್ಕೆ ವಿಜಯನಗರದ ಸಾಮ್ರಾಜ್ಯ ಇದ್ದ ಐತಿಹಾಸಿಕ ಸಂಬಂಧವೂ ಶೃಂಗೇರಿ ಮಠದ ಹಲವಾರು ಸಂಪ್ರದಾಯ, ಆಚರಣೆ ಹಾಗೂ ಉತ್ಸವಗಳ ಉಗಮಕ್ಕೆ ಪ್ರೇರಣೆಯಾಯಿತು. ವಿಜಯನಗರದ ಹಕ್ಕ-ಬುಕ್ಕರು ವಿದ್ಯಾರಣ್ಯರಿಗೆ ಕೊಟ್ಟ ರಾಜ ಲಾಂಛನವನ್ನು ಗೌರವದಿಂದ ಶೃಂಗೇರಿ ಮಠದಲ್ಲಿ ದಸರಾ ದರ್ಬಾರ್ ಆಚರಣೆ ಆರಂಭವಾಯಿತು. ವಿಜಯನಗರದ ಸ್ಥಾಪನೆಯಾಗಿ ಇಂದಿಗೆ ಸುಮಾರು ಆರೂವರೆ ಶತಮಾನಗಳು ಕಳೆದರೂ ಇಂದಿಗೂ ಐತಿಹಾಸಿಕ ಧಾರ್ಮಿಕ ಆಚರಣೆಯು ಶೃಂಗೇರಿ ಮಠದ ದಸರಾ ಹಬ್ಬದ ವಿಶೇಷತೆಯಾಗಿದೆ. ಶಾರದಾ ಮಾತೆಯ 9 ಅಲಂಕಾರಗಳು ಹೋಮಹವನ ಪಾರಾಯಣ ಇತ್ಯಾದಿ ಧಾರ್ಮಿಕ ಆಚರಣೆಗಳು ಸಾಧಾರಣವಾಗಿ ನಮ್ಮ ನಾಡಿನ ಎಲ್ಲ ಮಠ-ಮಂದಿರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಆದರೆ ಈ ದರ್ಬಾರ ಆಚರಣೆಯು ವಿಜಯನಗರದ ದೊರೆಗಳು ವಿಜಯನಗರ ವೆಂಬ ಮಹಾ ಸಾಮ್ರಾಜ್ಯವನ್ನು ಕಟ್ಟಲು ಕಾರಣೀಭೂತರಾದ ಶ್ರೀ ವಿದ್ಯಾರಣ್ಯರಿಗೆ ಕೊಟ್ಟ ರಾಜ್ಯ ಗೌರವದ ಸಂಕೇತವಾಗಿದ್ದು ಕನ್ನಡನಾಡಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುತ್ತದೆ.ಶೃಂಗೇರಿ ದಸರಾ ವೈಶಿಷ್ಟ್ಯತೆ. ವಿಜಯನಗರದ ದೊರೆಗಳ ನಂತರ ಕೆಳದಿ, ತ್ರಾವೆಂಕೂರ್, ಮೈಸೂರು, ಸುರಪುರ, ಜಮಖಂಡಿ, ನೇಪಾಳ, ಬರೋಡ ಮುಂತಾದ ರಾಜಸಂಸ್ಥಾನಗಳು ಶೃಂಗೇರಿ ಜಗದ್ಗುರುಗಳನ್ನು ಅಪಾರವಾಗಿ ಗೌರವಿಸುವ ಮಾರ್ಗದರ್ಶನ ಪಡೆದರೆಂದು ಪತ್ರಾಗಾರದ ಇಲಾಖೆಯ ದಾಖಲೆಗಳು ತಿಳಿಸುತ್ತವೆ. ಇಂದಿಗೂ ಶೃಂಗೇರಿ ದರ್ಬಾರ್ ನಲ್ಲಿ ಭಾರತದ ಹಲವಾರು ರಾಜವಂಶಸ್ಥರು ಗುರುಕಾಣಿಕೆಯನ್ನು ಸಲ್ಲಿಸುವುದು ವಿಶೇಷವಾಗಿದೆ. ಯಾವ ಸ್ವರ್ಣ ಸಿಂಹಾಸನವನ್ನು ಶ್ರೀ ವಿದ್ಯಾರಣ್ಯರು ಹರಿಹರ ಬುಕ್ಕರಾಯರಿಗೆ ಅಲಂಕರಿಸಲು ಸಹಾಯಮಾಡಿದ್ದರೊ ಆ ಸಿಂಹಾಸನವು ಪಾಂಡವರಿಗೆ ಮತ್ತು ವಿಕ್ರಮಾದಿತ್ಯನಿಗೆ ಸೇರಿದ್ದು ಎಂಬ ಪ್ರತೀತಿ ಇದೆ. ಇದೇ ಸ್ವರ್ಣ ಸಿಂಹಾಸನವನ್ನು ಮೈಸೂರು ದೊರೆಗಳು ವಶಪಡಿಸಿಕೊಂಡು ಮೈಸೂರು ಸಂಸ್ಥಾನವನ್ನು ಸಂಸ್ಥಾನವನ್ನು ಕಟ್ಟಿದ್ದರಿಂದ ಸಹಜವಾಗಿವೆ ಮೈಸೂರಿನ ಎಲ್ಲಾ ದೊರೆಗಳು ಶೃಂಗೇರಿ ಗುರುಗಳನ್ನು ರಾಜಗುರುಗಳು ಎಂದು ಗೌರವಿಸುವುದನ್ನು ನಾವು ಇತಿಹಾಸದ ದಾಖಲೆಗಳಲ್ಲಿ ಕಾಣಬಹುದು. ಇಂದಿಗೂ ಶೃಂಗೇರಿ ಜಗದ್ಗುರುಗಳವರು ಇಂದಿಗೂ ವಿಜಯದಶಮಿ ಮೆರವಣಿಗೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಭಕ್ತಿಪೂರ್ವಕವಾಗಿ ಅರ್ಪಿಸಿದ ಸ್ವರ್ಣ ಪಾಲಕಿಯನ್ನು ಅನುಭವಿಸುವುದನ್ನು ನಾವು ಕಾಣಬಹುದು. ಶೃಂಗೇರಿ ಜಗದ್ಗುರುಗಳಾಗಿದ್ದ ನರಸಿಂಹ ಭಾರತೀ ಸ್ವಾಮಿಗಳವರು ಚಾಮರಾಜ ಒಡೆಯರಿಗೆ ಬಳುವಳಿಯಾಗಿ ಆಶೀರ್ವದಿಸಿದ ನವರತ್ನ ಕೀಟವನ್ನು ಇಂದಿಗೂ ಮೈಸೂರು ದಸರಾ ಆಚರಣೆಯಲ್ಲಿ ಪೂಜಿಸುವುದು ಗುರು-ಶಿಷ್ಯ ಬಾಂಧವ್ಯಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ನಿಲ್ಲುತ್ತದೆ.

ಶೃಂಗೇರಿ ದಸರಾ ವೈಶಿಷ್ಟತೆ


ಶೃಂಗೇರಿ ಜಗದ್ಗುರುಗಳವರು ದರ್ಬಾರ್ ನಲ್ಲಿ ಅಲಂಕರಿಸುವ ರಜತ ಸಿಂಹಾಸನ ಜಮಖಂಡಿ ರಾಮಚಂದ್ರ, ಪಟವರ್ಧನ ಮಹಾರಾಜರ ಕಾಣಿಕೆಯಾಗಿದೆ. ಜಮಖಂಡಿ,ಕೋಚಿ, ಬರೋಡ ವಿಜಯನಗರ ಮುಂತಾದ ಸಂಸ್ಥಾನಗಳು ಕೊಟ್ಟ ಆಭರಣಗಳನ್ನು ಧರಿಸುವುದು ಶೃಂಗೇರಿ ಮಠ ಭಾರತದ ಮಧ್ಯಕಾಲೀನ ರಾಜಮನೆತನಕ್ಕೆ ಇರುವ ನಂಟಿನ ಇತಿಹಾಸವನ್ನು ಸಾರುತ್ತದೆ. ಟಿಪ್ಪು ಕೊಟ್ಟ ಮಕರ ಕಂಠಿಹಾರ, ಮದನ ವಿಲಾಸ ಸನ್ನಿಧಾನ ಅರ್ಪಿಸಿದ ವಜ್ರದ ಹಾರ, ವಿಜಯನಗರದ ದೊರೆಗಳು ಅರ್ಪಿಸಿದ ಸ್ವರ್ಣ ಪಾದಕ್ಕೆ ಮುಂತಾದ ಕೊಡುಗೆಗಳನ್ನು ಈ ದರ್ಬಾರ್ ಆಚರಣೆಯಲ್ಲಿ ನಾವು ಕಾಣಬಹುದು. ಶೃಂಗೇರಿ ಜಗದ್ಗುರುಗಳ ದರ್ಬಾರ್ ಆಚರಣೆಯು ಸಂಸ್ಕೃತದಲ್ಲಿ ಘೋಷಿಸುವ ಪಾಠಕ ಗಳಲ್ಲಿನ ವಿದ್ಯಾನಗರ ರಾಜ್ಯಧಾನಿ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂಬ ಮಹಾ ಬಿರುದಾವಳಿಗಳು ಕರ್ನಾಟಕ ಸಾಮ್ರಾಜ್ಯ ವೆಂಬ ಕನ್ನಡ ನಾಡನ್ನು ಕಟ್ಟುವಲ್ಲಿ ಶೃಂಗೇರಿ ಪೀಠದ ಪಾತ್ರವನ್ನು ವರ್ಣಿಸುತ್ತ ಶೃಂಗೇರಿ ಮಠ ಕನ್ನಡ ನಾಡಿನ ಉದಯಕ್ಕೂ ಇರುವ ಸಂಬಂಧವನ್ನು ಸಾರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...